ಪತ್ರಕರ್ತೆ ಹಾಗೂ ಬರಹಗಾರ್ತಿ ರಶ್ಮಿ ಎಸ್
ಮೌನೇಶ ಬಡಿಗೇರ ಅವರ ಶ್ರೀಗಳ ಅರಣ್ಯಕಾಂಡ ಪುಸ್ತಕದ ಶಾಸ್ತ್ರಿಸಂಗ ಕತೆಯಿಂದ
ಒಂದು ದೇಶದಲ್ಲಿ ಸೃಷ್ಟಿಯಾಗುವ ಕೋಮುವಾದದ ದೊಡ್ಡ ಅಲೆಯೊಂದುಎಷ್ಟೋ ದೂರದಲ್ಲಿರುವ ಒಬ್ಬ ಹುಡುಗನ ಮನಸಿನಲ್ಲಿ ಹೇಗೆ ಕಂಪನಗಳನ್ನು ಸೃಷ್ಟಿಸಬಲ್ಲದು ಮತ್ತು ಅಂಥ ಕಂಪನಗಳು ಹೇಗೆ ಕಾಮದ ರೂಪದಲ್ಲಿ ಕಾಮದಿಂದ ಹಿಂಸೆಯ ರೂಪಕ್ಕೆ ರೂಪಾಂತರ ಹೊಂದಬಹುದು ಮತ್ತು ಆ ಹಿಂಸೆಯ ತುತ್ತತುದಿಯಲ್ಲಿ ಸದಾ ಒಂದು ಅಮಾಯಕ ಹೆಣ್ಣು ಜೀವವಿರುತ್ತದೆ?
ಒಂಟಿ ಓಲೆಯ ಮುತ್ತು ಕತೆಯಿಂದ
ಉಸಿರಾಡೋ ಗಾಳಿಗೆ ಯಾವ ಜಾತಿ ಐತೆ ಮೇಡಂ, ನೀವೇ ಹೇಳಿ? ನೀವು ಕುಡಿದು ಬಿಟ್ಟಿದ್ದು ನಾನು ಕುಡಿದು ಬಿಡ್ತೀನಿ. ನಾನು ಕುಡಿದು ಬಿಟ್ಟಿದ್ದು ನೀವು ಕುಡೀತೀರಿ.ಬಡವ ಶ್ರೀಮಂತ ಎಲ್ಲ ಒಂದೇ ಅದರಲ್ಲಿ, ಅಂಥದ್ರಲ್ಲಿ ಪಾಪ ಗಾಳಿ ಇಲ್ದೆ ಒದ್ದಾಡ್ತಿದ್ದ ಫಾರೂಕನಿಗೆ ಗಾಳಿ ಕೊಡಲು ಅವನ ಜಾತಿ ಯಾಕೆ ನೋಡಲಿ? ಅದೂ ಅಲ್ಲದೆ ಗಾಳಿ ಆಂಜನೇಯ ನಮ್ಮನೆ ದೇವರು!
ಕಣ್ಣಿನ ಕಾಯಿಲೆ
ನಾವು ಯಾವುದೋ ಅನನ್ಯ ಘಟನೆಯನ್ನುಮರೆಯದೆ ಸದಾ ಜೀವಂತವಾಗಿ ಇಟ್ಟುಕೊಳ್ಳಲು ಅದನ್ನು ದಾಖಲಿಸುತ್ತೇವೆ.ಆದರೆ ಅದನ್ನು ದಾಖಲಿಸಿದ ಮರುಗಳಿಗೆಯೇ ಅದರಿಂದ ಬಿಡುಗಡೆ ಹೊಂದಿ, ಅದನ್ನು ಮರೆಯತೊಡಗುತ್ತೇವೆ.
ಯಾವಾಗ ಬಾಹ್ಯ ವ್ಯವಹಾರಗಳು ಬಂದಾಗುತ್ತವೆಯೋ ಆಗ ಅಂತರಂಗದ ವ್ಯಾಪಾರ ಇನ್ನಿಲ್ಲದಂತೆ ಗರಿಗೆದರಿ ಹಾರತೊಡಗುತ್ತದೆ.
ಹೆಣ್ಣನ್ನು ಕಣ್ಣಿನಲ್ಲೇ ಸುಲಿದು ನೋಡುವ ಸಮಾಜದ ಎದುರು, ಬೆತ್ತಲಾದ ಹೆಣ್ಣೇ ಹೆಚ್ಚು ಸುರಕ್ಷಿತ.
ಹಿಂಗ ಕಾಡುವ, ನಮ್ಮ ಒಳ ಹೊರಗನ್ನು ಕಾಣಿಸುವ ಇನ್ನಷ್ಟು ಸರಕು ಈ ಪುಸ್ತಕದ ಕತಿಯೊಳಗ ಸಿಗ್ತಾವ. ಕೆಲವು ಕಡೆ ನಮ್ಮ ಮೂತಿಗೆ ಹಿಡಿಯುವ ಕನ್ನಡಿಹಂಗ ಕಂಡ್ರ, ಇನ್ನೂ ಕೆಲವು ಕಡೆ ಸಮಾಜ ತೋರಿಸುವ ಭೂತಗನ್ನಡಿಯಾಗ್ತದ.
ರಂಗಭೂಮಿಯಂಥ ಪ್ರಬಲ ಮಾಧ್ಯಮದೊಳಗ ಇರೂದ್ರಿಂದ, ಪಾತ್ರ, ಭಾಷೆ ಎಲ್ಲ ಸಲೀಸಾಯ್ತು ಅಂತ ಒಂದ ವಾಕ್ಯದೊಳಗ ಹೇಳಿದ್ರ ತಪ್ಪಾಗ್ತದ. ಕತಿಯೊಳಗಿನ ಕಸುಬುದಾರಿಕೆ ಸಣ್ಣಗೆ ವಿಚಾರವಾದ, ಸಿದ್ಧಾಂತಗಳನ್ನು ಹೇಳ್ಕೊಂತ, ಜೀವನಪ್ರೀತಿಯತ್ತ ತಿರುಗ್ತದ. ಹೊರಲೋಕದ ಉಡಾಫೆಯನ್ನು ಹೇಳ್ಕೊಂತ ಆಂತರ್ಯದ ಗಂಭೀರ ಚಿಂತೆ, ಚಿಂತನೆಗಳಾಗಿ ಬದಲಾಗೂದನ್ನ ಹೇಳ್ತದ.
ಇದು, ಇಷ್ಟೆ.. ಇದು ಹಿಂಗೆ ಅಂತ ತೀರ್ಮಾನ ಕೊಡಾಕ ಆಗೂದಿಲ್ಲ. ನೀವು ಓದಿದಾಗ ನಿಮ್ಮೊಳಗೂ ಒಂದು ಜಗತ್ತು ತೆರೀತದ. ಅದಕ್ಕ ಈ ಪುಸ್ತಕ ಓದಬೇಕು.
ಅಗದಿ ಸಾವಕಾಶ. ನೀರಡಿಸಿದವ ನೀರು ಕುಡಿದಂಗ ಒಂದೇ ಗುಕ್ಕಿನಾಗ ಓದಿ ಮುಗಸೂದಲ್ಲ. ಇದೊಂಥರ ಈಟೀಟೆ… ಈಟೀಟೆ.. ಕಹಿಮಧುರ ಸವಿ ಸವದ್ಹಂಗ.
ನಮ್ಮ ಓದು ಗುಂಗಿಹುಳದ್ಹಂಗ ಇರಬೇಕು. ಒಂದು ಅದೇ ಗುಂಗನಾಗ ಇರುಹಂಗ ಮಾಡಬೇಕು. ಗುಂಗಿ ಹುಳದ್ಹಂಗ ಕಡ್ಕೊಂತ ಇರಬೇಕು.. ಅದು ಕಾಡ್ಕೊಂತ ಇರಬೇಕು. ಕಡೀದಿದ್ರೂ, ಕಾಡದಿದ್ರೂ ನಮ್ಮ ಸುತ್ತ ಅದರ ಗುಂಗಂತೂ ಇರಬೇಕು. ಇಷ್ಟು ಈ ಪುಸ್ತಕ ಮಾಡ್ತದ.